ನರ್ಗೀಸ್
	1929-ಹಿಂದಿ ಚಿತ್ರರಂಗದ ನಟಿ. ಈಕೆಯ ಮೊದಲ ಹೆಸರು ಫಾತಿಮಾರಷೀದ್. ತಾಯಿ ಜದ್ದನ್‍ಬಾಯಿ ಕಾಲದ ಪ್ರಸಿದ್ಧ ಗಾಯಕಿ, ನಟಿ ಹಾಗೂ ಚಿತ್ರನಿರ್ಮಾಪಕಿಯಾಗಿದ್ದಳು. ಈಕೆ ತನ್ನ ನಾಲ್ಕನೆಯ ವಯಸ್ಸಿನಲ್ಲಿಯೇ ಬೇಬಿರಾಣಿ ಎಂಬ ಹೆಸರಿನಿಂದ ಚಿತ್ರರಂಗವನ್ನು ಪ್ರವೇಶಿಸಿ ತಾಯಿ ಸಂಗೀತ್ ಮೂವಿಟೋನ್ ಎಂಬ ಸ್ವಂತ ಸಂಸ್ಥೆಗಾಗಿ ತಯಾರಿಸಿದ ತಲಾಷ್-ಇ-ಹಕ್ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದಳು. ವಿದ್ಯಾರ್ಥಿ ದೆಸೆಯಲ್ಲಿ ಒಳ್ಳೆಯ ಕ್ರೀಡಾಪಟುವಾಗಿದ್ದ ಈಕೆಗೆ ಸೈಕಲ್ ಸವಾರಿ, ಈಜುಗಾರಿಕೆ ಹಾಗೂ ಕ್ರಿಕೆಟ್‍ನಲ್ಲಿ ಅಪಾರ ಆಸಕ್ತಿಯಿತ್ತು. ವೈದ್ಯಳಾಗಬೇಕೆಂದು ಬಯಸಿದ ಈಕೆ ನಟಿಯಾದಳು. 1943ರಲ್ಲಿ ಮೆಹಬೂಬ್‍ಖಾನರ ತಕದೀರ್ ಚಿತ್ರದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಳು. ಇದರ ನಾಯಕ ನಟ ಮೋತಿಲಾಲ್. ಈ ಚಿತ್ರದಿಂದಲೇ ಈಕೆಯ ಹೆಸರು ನರ್ಗೀಸ್ ಎಂದಾಯಿತು. ತಕದೀರ್ ಅಪಾರ ಯಶಸ್ಸು ಕಂಡಿತಾಗಿ ಈಕೆಯ ತಾರಾಪಟ್ಟ ಭದ್ರಗೊಂಡಿತು. ಈಕೆಯ ಆರಂಭದ ಚಿತ್ರಗಳೆಂದರೆ ಫೀಮತ್ ಪಿಕ್ಚರ್ಸ್ ಅವರ ನರ್ಗೀಸ್, ಮೆಹಬೂಬರ ಹುಮಾಯೂನ್, ನರ್ಗೀಸ್ ಆಟ್ರ್ಸ್ ಕನ್‍ಸರ್ನ್ ಅವರ ರೋಮಿಯೋ-ಜೂಲಿಯಟ್. ನಟಿಯಾಗಿ ತನ್ನ ವೃತ್ತಿಯನ್ನು ಆರಂಭಿಸಿದ ಕಾಲದಲ್ಲಿಯೇ ಅಶೋಕ್ ಕುಮಾರ್, ಮೋತಿಲಾಲ್, ಜೈರಾಜ್, ಪಹಾರಿ ಸನ್ಯಾಲ್ ಮೊದಲಾದ ಆ ಕಾಲದ ನಟಶ್ರೇಷ್ಠರ ಜೊತೆಯಲ್ಲಿ ಅಭಿನಯಿಸಿದ ಖ್ಯಾತಿ ಈಕೆಯದು. ಈಕೆಯಂತೆಯೇ ಅಭಿನಯ ಸಾಮಥ್ರ್ಯ ಪಡೆದಿದ್ದ ಈಕೆಯ ಸಮವಯಸ್ಕ ಎನಿಸಿದ ದಿಲೀಪ್ ಕುಮಾರ್ ಜೊತೆ ನಟಿಸಿರುವ ಚಿತ್ರಗಳು (1948ರ ಮೇಲಾ ಮೊದಲ ಚಿತ್ರ) ಈಕೆಯ ಅಭಿನಯಕ್ಕೆ ಹೊಸ ಆಯಾಮವನ್ನು ಕೊಟ್ಟವು. ಈ ತಾರಾಜೋಡಿಯ ಜೋಗನ್, ಅಂದಾಜ್, ಅನೋಕ ಪ್ಯಾರ್, ಹಲ್‍ಚಲ್, ದೀದಾರ್ ಚಿತ್ರಗಳು ರಾಷ್ಟ್ರಾದ್ಯಂತ ಜನಪ್ರಿಯತೆ ಗಳಿಸಿದವು. ಅನಂತರ ಬಂದ ಆಗ್, ಆವಾರ, ಶ್ರೀ 420, ಜಾಗ್ತೇ ರಹೋ, ಬರ್‍ಸಾತ್, ಅಂಬರ್, ಜಾನ್ ಪಹಚಾನ್, ಚೋರಿ ಚೋರಿ ಮುಂತಾದ ಚಿತ್ರಗಳಲ್ಲಿ ರಾಜಕಪೂರನೊಂದಿಗೆ ಅಭಿನಯಿಸಿದಳು. ಈ ತಾರಾಜೋಡಿ ಆ ಕಾಲದ ಚಲನಚಿತ್ರ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವೆನಿಸಿತು. ಈಕೆಯ ಅಭಿನಯಸಾಮಥ್ರ್ಯಕ್ಕೆ ಕಿರೀಟವಿಟ್ಟ ಚಿತ್ರ ಮೆಹಬೂಬರ ಮದರ್ ಇಂಡಿಯ (1957). ಈ ಚಿತ್ರದಲ್ಲಿ ನೀಡಿದ ಅತ್ಯುತ್ತಮ ಅಭಿನಯಕ್ಕಾಗಿ ಈಕೆಗೆ ಫಿಲ್ಮ್‍ಫೇರ್ ಪ್ರಶಸ್ತಿ ಬಂತು. ಅಲ್ಲದೆ ಎರಡು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ (ಕಾರ್ಲೊವರಿ ಹಾಗೂ ಲಿಮಾ-1958) ಅತ್ಯುತ್ತಮ ನಟಿ ಎಂದು ನಿರ್ಣಯಿಸಲಾಯಿತು. 1958ರಲ್ಲಿ ಈಕೆಗೆ ಪದ್ಮಶ್ರೀ ಗೌರವವೂ ಸಂದಿತು. ಮದರ್ ಇಂಡಿಯಾದಲ್ಲಿ ತನ್ನ ಜೊತೆ ಅಭಿನಯಿಸಿದ್ದ ನಟ ಸುನೀಲ್ ದತ್ತನನ್ನು ಈಕೆ ಮದುವೆಯಾದಳು. ಈಕೆಯ ಕೊನೆಯ ಚಿತ್ರಗಳಾದ ಅದಾಲತ್, ಲಾಜ್ವಂತಿ, ಮಿಸ್ ಇಂಡಿಯಾ ಮೊದಲಾದವು ಅಂಥ ಶ್ರೇಷ್ಠಚಿತ್ರಗಳೆನಿಸಲಿಲ್ಲ. ತಾರಾಜೀವನದಿಂದ ನಿವೃತ್ತಿಯಾಗುವ ಮುನ್ನ ಈಕೆ ನಟಿಸಿದ ಕೊನೆಯ ಚಿತ್ರ ರಾತ್ ಔರ್ ದಿನ್, ದ್ವಂದ್ವ ವ್ಯಕ್ತಿತ್ವದ ಶ್ರೇಷ್ಠ ದ್ವಿಪಾತ್ರಾಭಿನಯಕ್ಕಾಗಿ ಈಕೆಗೆ ರಾಷ್ಟ್ರಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ಅಭಿನಯದಿಂದ ನಿವೃತ್ತಿಯಾದರೂ ಈಕೆ ಚಿತ್ರರಂಗದೊಂದಿಗೆ ನಿಕಟ ಬಾಂಧವ್ಯವನ್ನು ಇಟ್ಟುಕೊಂಡಿದ್ದಾಳೆ. ತನ್ನ ಪತಿಯ ಜೊತೆಯಲ್ಲಿ ಅಜಂತಾ ಆಟ್ರ್ಸ್ ಚಿತ್ರ ಸಂಸ್ಥೆಯನ್ನು ಕಟ್ಟಿ ದುಡಿಯುತ್ತಿದ್ದಾಳೆ. ಇಲ್ಲಿ ತಯಾರಿಸಿದ, ಈಕೆಯ ಪತಿ ಒಬ್ಬನೇ ನಟಿಸಿರುವ, ಪ್ರಾಯೋಗಿಕ ಚಿತ್ರವಾದ ಯಾದೇಂ ಚಿತ್ರದಲ್ಲಿ ಈಕೆ ನೆರಳಾಗಿ ಕಾಣಿಸಿಕೊಂಡಿದ್ದಾಳೆ. ಸಹಜಸೌಂದರ್ಯ ಹಾಗೂ ವ್ಯಕ್ತಿತ್ವಗಳಿಂದಾಗಿ ಈ ನಟಿ ಭಾರತದ ಚಲನಚಿತ್ರಗಳಲ್ಲಿ ಅನೇಕ ಕ್ರಾಂತಿಕಾರಕ ಪರಿವರ್ತನೆಗಳಿಗೆ ಕಾರಣಳಾಗಿದ್ದಾಳೆ. ಆವಾರ ಚಿತ್ರದಲ್ಲಿ ಈಜು ಉಡುಗೆಯಲ್ಲೂ ತೋಳಿಲ್ಲದ ರಾತ್ರಿಯುಡುಗೆಯಲ್ಲೂ ಕಾಣಿಸಿಕೊಂಡ ಪ್ರಥಮ ನಟಿ ಈಕೆ. ಕೆ.ಎ. ಅಬ್ಬಾಸರ ಅನ್ಹೋನಿ ಚಿತ್ರದಲ್ಲಿ ಸಿಗರೇಟು ಸೇದಿದ ಖ್ಯಾತಿ ಈಕೆಯದು. ಈಕೆ ತನ್ನದೇ ಆದ ಅಭಿನಯ ಹಾಗೂ ಭಾವಾಭಿವ್ಯಕ್ತಿಗಳಿಗೆ ಹೆಸರಾಗಿದ್ದಾಳೆ.
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ